ಜೊತೆಯಾಟದಲ್ಲಿ ದಾಖಲೆ ಬರೆದ ಸ್ವಪ್ನಿಲ್‌, ಅಂಕಿತ್‌

Sat 22nd Oct, 2016 Author: Kumar Prince Mukherjee

ಮುಂಬಯಿ: ಮಹಾರಾಷ್ಟ್ರ ತಂಡದ ಸ್ವಪ್ನಿಲ್‌ ಗುಗಾಲೆ ಹಾಗೂ ಅಂಕಿತ್‌ ಬಾವ್ನೆ ರಣಜಿ ಇತಿಹಾಸದಲ್ಲೇ ಹೊಸ ದಾಖಲೆಯೊಂದನ್ನು ಸೃಷ್ಟಿಸಿದ್ದಾರೆ. ಇಲ್ಲಿನ ವಾಂಖೆಡೇ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ದಿಲ್ಲಿ ವಿರುದ್ಧದ ಪಂದ್ಯದಲ್ಲಿ 594 ರನ್‌ ಗಳಿಸುವ ಮೂಲಕ ಜೊತೆಯಾಟದಲ್ಲಿ ನೂತನ ದಾಖಲೆ ಬರೆದರು. ಎಲ್ಲ ಮಾದರಿಯ ಕ್ರಿಕೆಟ್‌ನ ದಾಖಲೆಗಳನ್ನು ಗಮನಿಸಿದಾಗ ಈ ಜೊತೆಯಾಟ ಎರಡನೇ ಸ್ಥಾನದಲ್ಲಿದೆ. ನಾಯಕನಾಗಿ ಮೊದಲ ಪಂದ್ಯವಾಡುತ್ತಿರುವ ಮಹಾರಾಷ್ಟ್ರದ ಆರಂಭಿಕ ಆಟಗಾರ ಸ್ವಪ್ನಿಲ್‌ ಹಾಗೂ ಅಂಕಿತ್‌ 594 ರನ್‌ ಗಳಿಸಿದರು. ಸ್ವಪ್ನಿಲ್‌ ಅಜೇಯ 351 ರನ್‌ ಗಳಿಸಿದರೆ, ಅಂಕಿತ್‌ ಅಜೇಯ 258 ರನ್‌ ಗಳಿಸಿ 70 ವರ್ಷಗಳ ಹಿಂದಿನ ದಾಖಲೆ ಮುರಿದರು. ಮೂರನೇ ವಿಕೆಟ್‌ ಜೊತೆಯಾಟದಲ್ಲಿ ಮೂಡಿ ಬಂದ ಈ ದಾಖಲೆ 1946-47ರಲ್ಲಿ ಬರೋಡಾ ತಂಡದ ವಿಜಯ್‌ ಹಜಾರೆ ಹಾಗೂ ಗುಲ್‌ ಮೊಹಮ್ಮದ್‌ ಹೋಳ್ಕರ್‌ ವಿರುದ್ಧ ಗಳಿಸಿದ 577 ರನ್‌ಗಳ ದಾಖಲೆ ನೆಲಸಮವಾಯಿತು. ಶ್ರೀಲಂಕಾ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ನಡುವಿನ ಟೆಸ್ಟ್‌ ಪಂದ್ಯದಲ್ಲಿ ಮಹೇಲ ಜಯವರ್ದನೆ ಹಾಗೂ ಕುಮಾರ ಸಂಗಕ್ಕಾರ ಗಳಿಸಿದ 624 ರನ್‌ ಕ್ರಿಕೆಟ್‌ ಇತಿಹಾಸದಲ್ಲೇ ಬೃಹತ್‌ ಮೊತ್ತದ ಜೊತೆಯಾಟವಾಗಿದೆ. ಪಾಕಿಸ್ತಾನದ ರಫತ್‌ಉಲ್ಲಾ ಮೊಹಮ್ಮದ್‌ ಹಾಗೂ ಸಾಜಾದ್‌ ಅಮೀರ್‌ ದೇಶೀಯ ಕ್ರಿಕೆಟ್‌ನಲ್ಲಿ ಗಳಿಸಿದ್ದ 580 ರನ್‌ಗಳ ಜೊತೆಯಾಟ ಇದುವರೆಗಿನ ಎರಡನೇ ಶ್ರೇಷ್ಟ ಜೊತೆಯಾಟವಾಗಿತ್ತು. ಮಹಾರಾಷ್ಟ್ರ ತಂಡ 2 ವಿಕೆಟ್‌ ನಷ್ಟಕ್ಕೆ 635 ರನ್‌ ಗಳಿಸುತ್ತಿದ್ದಂತೆ ಸ್ವಪ್ನಿಲ್‌ ಡಿಕ್ಲೇರ್‌ ಘೋಷಿಸಿದರು. ಮೊದಲ ದಿನದ ಆರಂಭದಲ್ಲಿ ಮಹಾರಾಷ್ಟ್ರ 2 ವಿಕೆಟ್‌ ನಷ್ಟಕ್ಕೆ 41 ರನ್‌ ಗಳಿಸಿ ಸಂಕಷ್ಟದಲ್ಲಿದ್ದಿತ್ತು. 540 ರನ್‌ ಗಳಿಸುತ್ತಿದ್ದಂತೆ ರಣಜಿ ಕ್ರಿಕೆಟ್‌ ಇತಿಹಾಸದಲ್ಲಿನ ಮೂರನೇ ವಿಕೆಟ್‌ ಜತೆಯಾಟ ಮೂರಿಯಲ್ಪಟ್ಟಿತು. ಸೌರಾಷ್ಟ್ರ ಪರ 2012ರಲ್ಲಿ ಸಾಗರ್‌ ಜೊಕಿಯಾನಿ ಹಾಗೂ ರವೀಂದ್ರ ಜಡೇಜಾ ಮೂರನೇ ವಿಕೆಟ್‌ನಲ್ಲಿ 539ರನ್‌ ಗಳಿಸಿದ್ದರು.