ನಾಳೆ ನಾಲ್ಕನೇ ಏಕದಿನ ಆಡಲಿರುವ ಟೀಂ ಇಂಡಿಯಾ

Tue 25th Oct, 2016 Author: Kumar Prince Mukherjee

ರಾಂಚಿ: ನ್ಯೂಜಿಲೆಂಡ್ ವಿರುದ್ಧ ನಡೆಯುತ್ತಿರುವ ಏಕದಿನ ಸರಣಿಯ ನಾಲ್ಕನೇ ಪಂದ್ಯ ನಾಳೆ ರಾಂಚಿ ಮೈದಾನದಲ್ಲಿ ನಡೆಯಲಿದೆ.
 
ಈಗಾಗಲೇ ರಾಂಚಿಗೆ ಬಂದಿಳಿದಿರುವ ಉಭಯ ತಂಡಗಳು ಅಭ್ಯಾಸಕ್ಕಿಳಿದಿದೆ. ಈಗಾಗಲೇ ಭಾರತ ಸರಣಿಯಲ್ಲಿ 2-1 ರಿಂದ ಮುನ್ನಡೆ ಸಾಧಸಿದೆ. ನಾಳಿನ ಪಂದ್ಯ ಗೆದ್ದರೆ ಸರಣಿ ಗೆಲ್ಲಲಿದೆ.
 
ವಿಶೇಷ ಎಂದರೆ ಇದು ಟೀಂ ಇಂಡಿಯಾ ನಾಯಕ ಎಂ ಎಸ್ ಧೋನಿ ತವರಿನಲ್ಲಿ ನಡೆಯುತ್ತಿರುವ ಪಂದ್ಯ. ಮೊನ್ನೆ ನಡೆದ ಏಕದಿನ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದ ಧೋನಿ ತವರಿನ ಅಭಿಮಾನಿಗಳ ಎದರು ಮತ್ತದೇ ಸ್ಪೋಟಕ ಪ್ರದರ್ಶನ ನೀಡುವರೇ ಎಂದು ಕಾದು ನೋಡಬೇಕಿದೆ.
 
ಇನ್ನು ಭಾರತಕ್ಕೆ ಮಧ್ಯಮ ಕ್ರಮಾಂಕದಲ್ಲಿ ಧೋನಿ ಮತ್ತು ವಿರಾಟ್ ಕೊಹ್ಲಿ ಅದ್ಭುತ ಫಾರ್ಮ್ ನಲ್ಲಿರುವುದರಿಂದ ಚಿಂತೆಯಿಲ್ಲ. ಆದರೆ ಆರಂಭಿಕರದ್ದೇ ಸಮಸ್ಯೆ. ಅಜಿಂಕ್ಯಾ ರೆಹಾನೆ ಮತ್ತು ರೋಹಿತ್ ಶರ್ಮಾ ಇನ್ನೂ ತಮ್ಮ ಎಂದಿನ ಬ್ಯಾಟಿಂಗ್ ಪ್ರದರ್ಶಿಸಿಲ್ಲ. ಬೌಲಿಂಗ್ ನಲ್ಲಿ ಸ್ಪಿನ್  ಮತ್ತು ವೇಗದ ಡಿಪಾರ್ಟ್ ಮೆಂಟ್ ಉತ್ತಮ ಪ್ರದರ್ಶನವನ್ನೇ ತೋರಿದೆ. ಆದರೂ ಕೊನೆಯ ವಿಕೆಟ್ ಪಡೆಯಲು ಹೆಣಗಾಡುವ ಚಾಳಿ ಇನ್ನೂ ಬಿಟ್ಟಿಲ್ಲ.
 
ನ್ಯೂಜಿಲೆಂಡ್ ತಂಡಕ್ಕೆ ಸ್ವತಃ ನಾಯಕನೇ ಆಧಾರ ಸ್ತಂಭ. ಅವರ ಬೌಲರ್ ಗಳೂ ಉತ್ತಮ ಪ್ರದರ್ಶನವನ್ನೇ ನೀಡಿದ್ದಾರೆ. ಆದರೆ ಸ್ಪೋಟಕ ಬ್ಯಾಟಿಂಗ್ ಗೆ ಹೆಸರಾದ ರಾಸ್ ಟೇಲರ್ ಸಿಡಿದರೆ ಅವರ ಬ್ಯಾಟಿಂಗ್ ಶಕ್ತಿ ಹೆಚ್ಚಬಹುದು.
 
ರಾಂಚಿ ಪಿಚ್ ನಲ್ಲಿ ಇದುವರೆಗೆ ಸ್ಕೋರ್ 300 ದಾಟಿಲ್ಲ. ನಾಳೆ ಆ ದಾಖಲೆಯಾಗುತ್ತದೋ ನೋಡಬೇಕು.