ವೆಸ್ಟ್‌ ಇಂಡೀಸ್ ವನಿತೆಯರಿಗೆ ಸಿಂಹ ಸ್ವಪ್ನ

Fri 11th Nov, 2016 Author: Kumar Prince Mukherjee

ಮುಲಪಾಡು, ಆಂಧ್ರಪ್ರದೇಶ: ಕರ್ನಾಟಕದ ರಾಜೇಶ್ವರಿ ಗಾಯಕ್ವಾಡ್‌ (21ಕ್ಕೆ4) ಗುರುವಾರ ಗೋಕರಾಜು ಲಿಯಾಲ ಗಂಗರಾಜು ಎಸಿಎ ಕ್ರಿಕೆಟ್‌ ಮೈದಾನದಲ್ಲಿ ವೆಸ್ಟ್‌ ಇಂಡೀಸ್ ವನಿತೆಯರಿಗೆ ಸಿಂಹ ಸ್ವಪ್ನರಾದರು. ರಾಜೇಶ್ವರಿ ಅವರ ಅಮೋಘ ಸಾಮರ್ಥ್ಯದ ಬಲದಿಂದ ಭಾರತ ಮಹಿಳೆಯರ ತಂಡ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ 6 ವಿಕೆಟ್‌ಗಳಿಂದ ವೆಸ್ಟ್‌ ಇಂಡೀಸ್‌ ತಂಡವನ್ನು ಮಣಿಸಿದೆ. ಇದರೊಂದಿಗೆ ಮೂರು  ಪಂದ್ಯಗಳ ಸರಣಿಯಲ್ಲಿ 1–0ರಲ್ಲಿ ಮುನ್ನಡೆ ಪಡೆದುಕೊಂಡಿದೆ. ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿದ ಕೆರಿಬಿಯನ್‌ ನಾಡಿನ ತಂಡ 42.4 ಓವರ್‌ಗಳಲ್ಲಿ  131ರನ್‌ಗಳಿಗೆ ಆಲೌಟ್‌ ಆಯಿತು. ಗುರಿ ಬೆನ್ನಟ್ಟಿದ ಆತಿಥೇಯ ಭಾರತ ತಂಡ 39.1 ಓವರ್‌ಗಳಲ್ಲಿ 4 ವಿಕೆಟ್‌ ಕಳೆದುಕೊಂಡು ಗೆಲುವಿನ ದಡ ಸೇರಿತು. ಬ್ಯಾಟಿಂಗ್‌ ಆರಂಭಿಸಿದ ವೆಸ್ಟ್‌ ಇಂಡೀಸ್‌ ತಂಡಕ್ಕೆ ದಿನದ ಎರಡನೇ ಓವರ್‌ನಲ್ಲಿ ಶಿಖಾ ಪಾಂಡೆ ಮೊದಲ ಆಘಾತ ನೀಡಿದರು. ಶಿಖಾ ತಾವೆಸೆದ ಓವರ್‌ನ ಎರಡನೇ ಎಸೆತದಲ್ಲಿ ಶಾಕ್ವುನಾ ಕ್ವಿಂಟೆನ್‌ (0) ಅವರನ್ನು ಎಲ್‌ಬಿಡಬ್ಲ್ಯು ಬಲೆಗೆ ಸಿಲುಕಿಸಿದರು. ವಿಕೆಟ್‌ ಕೀಪರ್‌ ಬ್ಯಾಟ್ಸ್‌ವುಮನ್‌ ಮೆರಿಸಾ ಆ್ಯಗುಲೆರಾ (ಔಟಾಗದೆ 42; 77ಎ, 6ಬೌಂ) ಅವರನ್ನು ಹೊರತುಪಡಿಸಿ ಉಳಿದ ಆಟಗಾರ್ತಿಯರು ದೊಡ್ಡ ಮೊತ್ತ ಪೇರಿಸಲು ವಿಫಲರಾದರು. ಹೀಗಾಗಿ ತಂಡ ಅಲ್ಪ ಮೊತ್ತಕ್ಕೆ ಕುಸಿಯಿತು. ಗುರಿ ಬೆನ್ನಟ್ಟುವ ಹಾದಿಯಲ್ಲಿ ಮಿಥಾಲಿ ರಾಜ್‌ ಪಡೆ ಕೂಡ ಆರಂಭಿಕ ಆಘಾತ ಅನುಭವಿಸಿತು. ಆದರೆ ನಾಯಕಿ ಮಿಥಾಲಿ (ಔಟಾಗದೆ 46) ಮತ್ತು ವೇದಾ ಕೃಷ್ಣಮೂರ್ತಿ (ಔಟಾಗದೆ 52) ಜವಾಬ್ದಾರಿಯುತ ಬ್ಯಾಟಿಂಗ್‌ ನಡೆಸಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು. ಸಂಕ್ಷಿಪ್ತ ಸ್ಕೋರ್‌: ವೆಸ್ಟ್‌ ಇಂಡೀಸ್‌: 42.4 ಓವರ್‌ಗಳಲ್ಲಿ 131 (ಹೇಲಿ ಮ್ಯಾಥ್ಯೂಸ್‌ 24, ಸ್ಟೆಫಾನಿ ಟೇಲರ್‌ 19, ಮೆರಿಸಾ ಆ್ಯಗುಲೆರಾ ಔಟಾಗದೆ 42; ಶಿಖಾ ಪಾಂಡೆ 22ಕ್ಕೆ1, ಏಕ್ತಾ ಬಿಸ್ತ್‌ 14ಕ್ಕೆ3, ರಾಜೇಶ್ವರಿ ಗಾಯಕ್ವಾಡ್‌ 21ಕ್ಕೆ4). ಭಾರತ: 39.1 ಓವರ್‌ಗಳಲ್ಲಿ 4 ವಿಕೆಟ್‌ಗೆ 133 (ದೀಪ್ತಿ ಶರ್ಮಾ 16, ಸ್ಮೃತಿ ಮಂದಾನ 7, ಮಿಥಾಲಿ ರಾಜ್‌ ಔಟಾಗದೆ 46, ವೇದಾ ಕೃಷ್ಣಮೂರ್ತಿ ಔಟಾಗದೆ 52; ಶಕೇರಾ ಸೆಲ್ಮಾನ್‌ 11ಕ್ಕೆ2, ಹೇಲಿ ಮ್ಯಾಥ್ಯೂಸ್‌ 18ಕ್ಕೆ1, ಆಫಿ ಫ್ಲೆಚರ್‌ 20ಕ್ಕೆ1).